ಖರೋಷ್ಠೀ	-
ಭಾರತದ ವಾಯವ್ಯಗಡಿಯಲ್ಲಿ ಕ್ರಿ.ಪೂ. ಸು. 3ನೆಯ ಶತಮಾನದಿಂದ ಕ್ರಿ. ಶ. ಸು. 5ನೆಯ ಶತಮಾನದವರೆಗೆ ಬಳಕೆಯಲ್ಲಿದ್ದ ಒಂದು ಲಿಪಿ.  ಬ್ಯಾಕ್ಟ್ರಿಯನರು, ಪಾರ್ಥಿಯನರು, ಶಕರು, ಕುಶಾನರು ಇದನ್ನು ಉಪಯೋಗಿಸುತ್ತಿದ್ದರು. ಮೌರ್ಯರೂ ಈ ಪ್ರಾಂತ್ಯದಲ್ಲಿ ಖರೋಷ್ಠೀ ಲಿಪಿಯನ್ನೇ ಉಪಯೋಗಿಸುತ್ತಿದ್ದರು.  ಅಶೋಕನ ಶಾಬಾಸ್‍ಗಾರಿ ಮತ್ತು ಮಾನ್‍ಸೇರ್ ಶಾಸನಗಳು ಖರೋóಷ್ಠೀ ಲಿಪಿಯಲ್ಲಿವೆ.
ಈ ಲಿಪಿಯ ಉಗಮದ ಬಗ್ಗೆ ಒಮ್ಮತವಿಲ್ಲದಿದ್ದರೂ ಇದು ಅರಾಮೇಯಿಕ್ ಲಿಪಿಯಿಂದ ಹುಟ್ಟಿತೆಂದು ಅನೇಕರ ಅಭಿಪ್ರಾಯ. ಎರಡೂ ಲಿಪಿಗಳಿಗೆ ಬಹಳ ಹೋಲಿಕೆ ಇದೆ; ಎರಡನ್ನೂ ಬಲದಿಂದ ಎಡಕ್ಕೆ ಬರೆಯುತ್ತಾರೆ. ಖರೋಷ್ಠೀ ಎಂಬುದು ಇರಾನಿಯನ್ ಭಾಷೆಯ ಖರಪೊಸ್ತ (ಕತ್ತೆಯ ಚರ್ಮ) ಎಂಬ ಪದದ ಸಂಸ್ಕøತ ರೂಪಾಂತರವೆಂದು ಮೊದಲು ಕತ್ತೆಯ ಚರ್ಮದ ಮೇಲೆ ಈ ಲಿಪಿಯಲ್ಲಿ ಬರೆಯುತ್ತಿದ್ದುದರಿಂದ ಅದಕ್ಕೆ ಈ ಹೆಸರು ಬಂದಿದೆಯೆಂದೂ ಬ್ಯೂಲರನ ಮತ.

ಖರೋಷ್ಠೀ ಲಿಪಿ ಅದರ ಸಮಕಾಲೀನವಾದ ಬ್ರಾಹ್ಮೀಲಿಪಿಗಿಂತ ಭಿನ್ನವಾದ್ದು. ಬ್ರಾಹ್ಮೀಯನ್ನು ಎಡಗಡೆಯಿಂದ ಬಲಗಡೆಗೆ ಬರೆಯುತ್ತಾರೆ. ಖರೋಷ್ಟೀಲಿಪಿಯಲ್ಲಿ ದೀರ್ಘಸ್ವರಗಳ ಸಂಕೇತವಿಲ್ಲ ಮತ್ತು ವ್ಯಂಜನಗಳ ಅನಂತರ ಬರುವ ಸ್ವರಗಳನ್ನು ಪೂರ್ಣವಾಗಿ ಬರೆಯುವುದಿಲ್ಲ. ಖರೋಷ್ಠೀಯ ಅಕ್ಷರಗಳು ಸ್ವಲ್ಪ ಅಂಕು ಡೊಂಕಾಗಿದ್ದರೆ ಬ್ರಾಹ್ಮೀಯವು ನೇರವಾಗಿವೆ. ಖರೋಷ್ಠೀ ಲಿಪಿ ಭಾರತದಲ್ಲಿ ಬಹುಕಾಲ ಬಾಳಲಿಲ್ಲ. ಕ್ರಿ.ಶ.ಸು. 5 ಅಥವಾ 6ನೆಯ ಶತಮಾನದ ವೇಳೆಗೆ ಭಾತರದಲ್ಲಿ ಅದರ ಉಪಯೋಗ ನಶಿಸಿಹೋಯಿತು.						 					(ಎಂ.ಎಸ್.ಕೆ.ಎಂ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ